ಪ್ರಾಗ್
 	ಚೆಕೊಸ್ಲೊವಾಕಿಯ ಸಮಾಜವಾದಿ ಗಣರಾಜ್ಯದ ರಾಜಧಾನಿ ಯೂರೋಪಿನ ಅತ್ಯಂತ ಸುಂದರ ನಗರಗಳ ಪೈಕಿ ಒಂದು. ಮಾಲ್‍ಡೌ (ವಲ್ಟವ) ನದಿಯ ಉಭಯದಂಡೆಗಳ ಮೇಲೆ ವ್ಯಾಪಿಸಿರುವ ಈ ನಗರ ರೋಮ್ ನಗರದಂತೆ ಏಳು ಬೆಟ್ಟಗಳ ನಡುವೆ ಹರಡಿವೆ. ಸಮುದ್ರ ಮಟ್ಟಕ್ಕೆ ನಗರದ ಕನಿಷ್ಠ ಎತ್ತರ ಸು. 190ಮೀ. ಹ್ವೈಟ್ ಮೌಂಟನ್ ಶಿಖರದಿಂದ ಸು. 380ಮೀ. ಬೇಸಗೆಯ ಉಷ್ಣತೆ 190ಅ ಹಿಮಗಾಲದ ಉಷ್ಣತೆ 00ಅ ವರಗೆ ಇಳಿಯುವುದು ನಗರದ ವಿಸ್ತೀರ್ಣ 496 ಚ. ಕಿಮೀ. ಜನಸಂಖ್ಯೆ 11,82,853 (ಡಿಸಂಬರ್ 1977).

	ಇಂದಿನ ಷ್ರಾಗ್ ನಗರ ಪ್ರದೇಶ ಪ್ರಾಚೀನ ಕಾಲದಲ್ಲಿ ಉತ್ತರ ಮತ್ತು ದಕ್ಷಿಣ ಯೂರೋಪಿನ ವ್ಯಾಪಾರ ಕೇಂದ್ರವಾಗಿತ್ತು. ಈ ಭಾಗದಲ್ಲಿ ಕೆಲ್ಟ್ ಜನ ವಸಾಹತುಗಳನ್ನು ಕ್ರಿ. ಪೂ. 500 ಮತ್ತು ಕ್ರಿ. ಪೂ. 200ರ ನಡುವೆ ಸ್ಥಾಪಿಸಿದರು.  ಪಟ್ಟಣದ ದಕ್ಷಿಣದಲ್ಲಿರುವ ಜಾವಿಸ್ಟ್ ಕೋಟಿಯನ್ನು ಕಟ್ಟಿದವರು. ಇವರೇ ಕ್ರಿ. ಶ. 4 ಮತ್ತು 6 ನೆಯ ಶತಮಾನಗಳ ನಡುವೆ ಸ್ಲಾವ್ ಹಾಗೂ ಅವರ್ ಬುಡಕಟ್ಟಿನ  ಜನ ಮಾಲ್‍ಡೌ ದಂಡೆಯ ಮೇಲೆ ನೆಲಸಿದರು. 10ನೆಯ ಶತಮಾನದಲ್ಲಿ ಬೊಹೀಮಿಯಾದ ಪ್ರಿಮಿಸ್ಲಡ್ ರಾಜಸಂತತಿ ಪ್ರಾಗ್ ಪಟ್ಟಣವನ್ನು ಬೋಹೀಮಿಯಾದ ರಾಜಧಾನಿಯಾಗಿ ಮಾಡಿಕೊಂಡಿತು. ಈ ವಂಶದ ಅರಸ ವೆನ್ಸೆಸ್‍ಲಾಸ್ 935ರಲ್ಲಿ ಕೊಲೆಯಾದ. ಅವನ ತರುವಾಯ ಬೋಲೆಸ್ಲಾವ್ (935-967)ಚೆಕ್ ರಾಜ್ಯವನ್ನು ಸಂಘಟಿಸಿ ಜರ್ಮನರಿಂದ ರಕ್ಷಿಸಿದ. 965ರ ಹೊತ್ತಿಗೆ ಪಟ್ಟಣ ಪ್ರಸಿದ್ಧವ್ಯಾಪಾರ ಸ್ಥಳವಾಯಿತು. 973ರಲ್ಲಿ ಕ್ಯಾಥೊಲಿಕ್ ಧರ್ಮ ಪ್ರಚಾರಕ್ಕೆ ಅರ್ಚ್‍ಬಿಷಪ್ ಧರ್ಮಾಧಿಕಾರಿಯನ್ನು ನೇಮಿಸಲಾಯಿತು. ಹಳೆಯ ಪಟ್ಟಣ 1230ರಲ್ಲಿ ಕೋಟೆಯ ಗೋಡೆಗಳಿಂದ ರಕ್ಷಿತವಾಗಿ ಬರೋ ಆಡಳಿತ ಘಟಕವಾಯಿತು. 15ನೆಯ ಶತಮಾನದಲ್ಲಿ ಪ್ರಿಮಿಸ್ಲೈಡ್ ರಾಜವಂಶದ ಅವನತಿಯಾಗಿ ಲಕ್ಸಂಬರ್ಗ್ ರಾಜರು ಏಳಿಗೆಗೆ ಬಂದು ಪವಿತ್ರ ರೋಮನ್ ಚಕ್ರವರ್ತಿಗಳು (ಹೋಲಿ ರೋಮನ್ ಎಂಪರರ್ಸ್) ಎಂಬ ಬಿರುದಿನೊಂದಿಗೆ ಪ್ರಾಗ್ ಪಟ್ಟಣದಿಂದ ಆಳಲಾರಂಭಿಸಿದರು. ಅವರಲ್ಲಿ ನಾಲ್ಕನೆಯ ಚಾಲ್ರ್ಸ್ ಕಾಲದಲ್ಲಿ (1346-1378) ಪಟ್ಟಣ ಬೆಳೆಯಿತು. ಮಧ್ಯಯೂರೋಪಿನಲ್ಲೇ ಪ್ರಥಮವಾಗಿ ವರ್ಷಗಳ ಯುದ್ದಕಾಲದಲ್ಲಿ (1618-48) ಈ ಪಟ್ಟಣ ಮುತ್ತಿಗೆಗೊಳಗಾಯಿತು (1620). ಮುಂದೆ 1648ರಲ್ಲಿ ಸ್ವೀಡನ್‍ಪಡೆಗಳು ಆಕ್ರಮಿಸಿದಾಗ ಮತ್ತು ತರುವಾಯದ ವರ್ಷಗಳಲ್ಲಿ ಪೇಗ್ ಬಾಧಿಸಿದ್ದೂ ಪಟ್ಟಣಕ್ಕೆ ಅಪಾರ ಹಾನಿಯಾಯಿತು. 1741ರಲ್ಲಿ ನಗರ ಫ್ರೆಂಚರ ವಶವಾಯಿತು. ಏಳುವರ್ಷಗಳ ಯುದ್ದದಲ್ಲಿ (1756-63)ಪ್ರಷ್ಯನರ ಆಕ್ರಮಣ ನಡೆಯಿತು(1757). ಮುಂದೆ 19ನೆಯ ಶತಮಾನದಲ್ಲಿ ಈ ನಗರದ ಬೆಳೆವಣಿಗೆಯ ಮೇಲೆ ಪ್ರಭಾವ ಬೀರಿದಂತೆ ಕೆಲವು ರಾಜಕೀಯ ಆಂದೋಲನಗಳು ನಡೆದವು. ಆಸ್ಟ್ರಿಯದ ಹ್ಯಾಪ್ಸ್ ಬರ್ಗ ರಾಜವಂಶದ ಆಳ್ವಿಕೆಯ ವಿರುದ್ದ ವಿದ್ಯಾರ್ಥಿಗಳು ಕಲೆಗಾರರು ಹಾಗೂ ಕಾರ್ಮಿಕರು ಹೂಡಿದ ಚಳವಳಿಯ(1848) ಪರಿಣಾಮವಾಗಿ ಪ್ರಾಗ್ ಪುರಸಭೆಯಲ್ಲಿ ಚೆಕ್ ಸದಸ್ಯರದೇ ಬಹುಮತವಾಯಿತು. 1918ರಲ್ಲಿ ಪ್ರಾಗ್ ಸ್ವತಂತ್ರ ಚೆಕೊಸ್ಲೊವಾರೆಯ ಗಣರಾಜ್ಯದ ರಾಜಧಾನಿ ಆಯಿತು. ಮುಂದೆ ಎರಡೇ ವರ್ಷಗಳಲ್ಲಿ ಇದು 19 ಆಡಳಿತ ವಿಭಾಗಗಳ ಪ್ರಾಗ್ ಮಹಾನಗರವಾಯಿತು. ಆದರೆ ಮ್ಯೂನಿಕ್ ಒಪ್ಪಂದದ ಪ್ರಕಾರ (1938)ಈ ನಗರ ಜರ್ಮನಿಗೆ ಅಧೀನವಾಗಿ ಇದರ ಅಭಿವೃದ್ದಿ ಕುಂಠಿತವಾಯಿತು. ಎರಡನೆಯ ಮಹಾ ಯುದ್ದದಲ್ಲಿ ಜರ್ಮನಿಯ ವಿರುದ್ದ ಪ್ರಾಗ್ ಪ್ರಜೆಗಳು (ಮೇ 1945) ದಂಗೆ ಎದ್ದು ಹೋರಾಡಿದರು. ಆಗ ರಷ್ಯದ ಸೇನೆಯ ನೆರವಿನಿಂದ ಪ್ರಾಗ್ ಜರ್ಮನರ ಹಿಡಿತದಿಂದ ಮುಕ್ತವಾಯಿತು. ಯುದ್ದನಂತರ ನಗರದ ಆರ್ಥಿಕ ಸ್ಥಿತಿ ಪ್ರಗತಿ ಪಥದಲ್ಲಿ ಸಾಗಿತು. ಬಾಂಬುಗಳಿಂದ ನಾಶಗೊಂಡ ನಗರವನ್ನು ಪುನಾರಚಿಸಿ ಅಲ್ಲಿಯ ಪ್ರಾಚಿನ ಕಟ್ಟಡಗಳನ್ನು ಹಾಗೂ ಐತಿಹಾಸಿಕ ಸ್ಮಾರಕಗಳನ್ನು ರಕ್ಷಿಸಲು ಯುಕ್ತಕ್ರಮಕೈಗೊಳ್ಳಲಾಯಿತು. ನಗರ ಶೀಘ್ರವಾಗಿ ಅಭಿವೃದ್ದಿ ಹೊಂದಿತು. ಎರಡನೆಯ ಮಹಾಯುದ್ದ ತರುವಾಯ ಪ್ರಾಗ್ ನಗರಾಡಳಿತ 150 ಸದಸ್ಯರ ಪ್ರಾಗ್ ರಾಷ್ಟ್ರೀಯ ಸಮಿತಿಯ ವಶಕ್ಕೆ ಬಂದಿತು. ಪ್ರಧಾನ ಆಡಳಿತಾಧಿಕಾರಿ ಮೇಯರ್, ಈತನ ನೆರವಿಗೆ 18 ಮಂದಿ ಸದಸ್ಯರುಳ್ಳ ಒಂದು ಸಭೆಯಿದೆ.

	ಪ್ರಾಗ್ ಗಾತಿಕ್‍ಶೈಲಿಯ ಮತ್ತು ಆಧುನಿಕ ಶೈಲಿಯ ಕಟ್ಟಡ ಶಿಲ್ಪಕ್ಕೆ ಈ ನಗರ ಪ್ರಸಿದ್ದವಾಗಿದೆ. ಮಾಲ್ ಡೌ ನದಿ ದಂಡೆಯ ಬೆಟ್ಟದ ಮೇಲಿನ ವಿಸ್ಟ್ರಾಡ್ ದುರ್ಗಇಲ್ಲಿಯ ಅತ್ಯಂತ ಪ್ರಾಚೀನ ಕಟ್ಟಡ. ಕ್ರಿ.ಶ. 1170ರಲ್ಲಿ ಇಲ್ಲಿಯ ನದಿಗೆ ಅಡ್ಡಲಾಗಿ ಮೊದಲ ಕಲ್ಲು ಸೇತುವೆಯ ರಚನೆಯಾಯಿತು.  1230ರಲ್ಲಿ ಕೋಟೆಯ ಗೋಡೆಗಳಿಂದ ರಕ್ಷಿತವಾದ ಹಳೆಯ ಪಟ್ಟಣ ಬರೋ ಆಡಳಿತ ವಿಭಾಗವಾಯಿತು. 1357ರಲ್ಲಿ ಕಟ್ಟಿದ ಚಾಲ್ರ್ಸ್ ಸೇತುವೆಯನ್ನು 1970ರಲ್ಲಿ ದುರಸ್ತು ಮಾಡಿದರು. 1344ರಲ್ಲಿ ಕಟ್ಟಲು ಪ್ರಾರಂಭಿಸಿದ ಸೇಂಟ್ ವೀಟಸ್ ಚರ್ಚ್ 1924ರಲ್ಲಿ ಪೂರ್ಣಗೊಂಡಿತು. ಸಾಹಿತ್ಯ ಕಲೆಗಳ ಪುನರುಜ್ಜೀವನ (ರೆನೆಸಾನ್ಸ್) ಕಾಲದಲ್ಲಿ ಪ್ರಾಗ್ ಪಟ್ಟಣದಲ್ಲಿ ಗಾತಿಕ್ ಶೈಲಿಯ ಕಲಾತ್ಮಕ ಬೃಹತ್ ಕಟ್ಟಡಗಳ ಹಾಗೂ ಇಗರ್ಜಿಗಳ ರಚನೆಯಾಯಿತು. 19ನೆಯ ಶತಮಾನದ ಕೈಗಾರಿಕಾ ಕ್ರಾಂತಿ ಪ್ರಾಗ್ ನಗರ ಬೆಳೆವಣಿಗೆಯ ಮೇಲೆ ಪ್ರಭಾವಬೀರಿ ಅನೇಕ ಬದಲಾವಣೆ ತಂದಿತು. 1817ರಲ್ಲಿ ಪಟ್ಟಣದ ಮೊದಲ ಆಧುನಿಕ ಬಡಾವಣೆಯ ಸ್ಥಾಪನೆ ಆಯಿತು. ನದಿಯ ಮೇಲೆ ಹಲವಾರು ಸೇತುವೆಗಳ ರಚನೆ, ಹೊಸ ಇಗರ್ಜಿಗಳು ಹಾಗೂ ಉದ್ಯಾನಗಳು ಸ್ಥಾಪನೆ ಮುಂತದ ನಿವೇಶಗಳಿಂದ ಪ್ರಾಗ್ ನೂರು ಗೋಪುರಗಳ ನಗರ ಎನಿಸಿಕೊಂಡಿತು. ಇಲ್ಲಿ ಅನೇಕ ಹೊಸ ಹೊಸ ಕೈಗಾರಿಕೆಗಳು ಪ್ರಾರಂಭವಾದುವು. ಕ್ಲಾಡ್‍ನ್ ಹಾಗೂ ಕ್ರಾಲವ್ ದ್ಯೂರ್  ಅನೇಕ ಕಲ್ಲಿದ್ದಲು ಗಣಿಗಳನ್ನು ಕಬ್ಬಿಣದ ಕಾರ್ಖಾನೆಗಳನ್ನೂ ಸ್ಥಾಪಿಸಲಾಯಿತು.  1845ರಲ್ಲಿ ಪಟ್ಟಣಕ್ಕೆ ರೈಲು ಸಂಪರ್ಕ ಸೌಲಭ್ಯ ದೊರೆಯಿತು. 1885ರಲ್ಲಿ ರಾಷ್ಟ್ರೀಯ ವಸ್ತು ಸಂಗ್ರಹಾಲಯ, 1868ರಲ್ಲಿ ರಾಷ್ಟ್ರೀಯ ನಾಟಕಶಾಲೆ. 1890ರಲ್ಲಿ ವಿದ್ಯುತ್ ಟ್ರಾಮ್ ಸಂಚಾರ ಸೌಲಭ್ಯ ಹಾಗೂ ಪ್ಯಾರಿಸ್ ನಗರದ ಐಫಲ್ ಗೋಪುರದ ಮಾದರಿಯಲ್ಲಿ ಒಂದು ಗೋಪುರದ ರಚನೆ ಮುಂತಾದವು ನಿರ್ಮಾಣಗೊಂಡವು. ಇವಲ್ಲದೆ ಪ್ರಸಿದ್ದ ಕಟ್ಟಡಗಳಲ್ಲಿ 15ನೆಯ ಶತಮಾನದ ಟೈನ್‍ಚರ್ಚ್. 14ನೆಯ ಶತಮಾನದ ಯಹೊದಿಪೂಜಾಮಂದಿರ, 17ನೆಯ ಶತಮಾನದ ಸೇಂಟ್ ನಿಕೋಲಾಸ್ ಚರ್ಚ್, ಹಾಗೂ 12ನೆಯ ಶತಮಾನದ ಜಿûಯಾನ್ ಸಂನ್ಯಾಸಿ ಮಠ ಮುಂತಾದವನ್ನು ಹೆಸರಿಸಬಹುದು.
(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ